ಬೈಂದೂರು: ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು , ಆರೋಪಿಯಿಂದ 6 ಲಕ್ಷ ರೂ. ನಗದು ವಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಯಡ್ತರೆ ಗ್ರಾಮದ ಎಸ್ಬಿಐ ಬ್ಯಾಂಕ್ ಹಿಂಭಾಗದ ಬಾಡಿಗೆ ಮನೆಯೊಂದರಲ್ಲಿ ನಡೆದಿದ್ದ ಬೃಹತ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಯುವಕನನ್ನು ಬಂಧಿಸಿರುವ ಪೊಲೀಸರು, ಆತನಿಂದ ಕಳವು ಮಾಡಲಾಗಿದ್ದ 6 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ರಾಜಸ್ಥಾನ ಮೂಲದ ಮಹೇಂದ್ರ ಸೈನ್ (23) ಎಂದು ಗುರುತಿಸಲಾಗಿದೆ.

ಕಳೆದ ಏಪ್ರಿಲ್ 23ರಂದು ಮಧ್ಯಾಹ್ನ 3:00 ರಿಂದ ರಾತ್ರಿ 10:00 ಗಂಟೆಯ ಅವಧಿಯಲ್ಲಿ, ಯಡ್ತರೆ ಗ್ರಾಮದ ಎಸ್ಬಿಐ ಬ್ಯಾಂಕ್ ಹಿಂಭಾಗ ವಾಸವಿದ್ದ ರಾಜಸ್ಥಾನ ಮೂಲದ ರಾವಲ್ ಸಿಂಗ್ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳತನ ನಡೆದಿತ್ತು. ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ಗೋಡೇಜ್ನಲ್ಲಿದ್ದ 6 ಲಕ್ಷ ರೂ. ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ, ಬೈಂದೂರು ವೃತ್ತ ನಿರೀಕ್ಷಕರಾದ ಶಿವಕುಮಾರ್ ಬಿ. ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖೆ ಚುರುಕುಗೊಳಿಸಿದ ತಂಡವು ಮೇ.7ರಂದು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳವುಗೈದ 6 ಲಕ್ಷ ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಬೈಂದೂರು ಪಿ.ಎಸ್.ಐ ಗಳಾದ ಸುನೀಲ್ ಕುಮಾರ್ ಬಿ.ವೈ. ಮತ್ತು ನವೀನ ಬೋರಕರ, ಸಿಬ್ಬಂದಿಗಳಾದ ಸಂತೋಷ ಕುಮಾರ ಯು, ಚಿದಾನಂದ, ಜಯರಾಮ, ಮಾಳಪ್ಪ ದೇಸಾಯಿ, ಪರಯ್ಯ ಮಠಪತಿ ಹಾಗೂ ವೃತ್ತ ಕಛೇರಿಯ ಶಿವಾನಂದ ಹುದ್ದಾರ, ಅಶೋಕ ರಾಥೋಡ ಮತ್ತು ಸಿಡಿಆರ್ ವಿಭಾಗದ ದಿನೇಶ್ ಭಾಗವಹಿಸಿದ್ದರು.